ಹಲಶಿ
 	ಭಾರತದ ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಒಂದು ಐತಿಹಾಸಿಕ ಸ್ಥಳ. ಖಾನಾಪುರಕ್ಕೆ 14 ಕಿಮೀ ದೂರದಲ್ಲಿದೆ.

	ಪ್ರಾಚೀನದಲ್ಲಿ ಶ್ರೀ ವಿಜಯ ಪಲಾಶಿಕಾ ಅಥವಾ ಹಲಶಿಗೆ ಎಂಬ ಹೆಸರನ್ನು ಹೊಂದಿದ್ದ ಈ ಸ್ಥಳ ಬನವಾಸಿಯ ಕದಂಬರ ಕಾಲದಲ್ಲಿ ಅವರ ಎರಡನೆಯ ರಾಜಧಾನಿಯಾಗಿಯೂ ಗೋವ ಕದಂಬರ ಕಾಲದಲ್ಲಿ ಹಲಶಿಗೆ 12,000 ವಿಭಾಗದ ಪ್ರಮುಖ ಸ್ಥಳವಾಗಿಯೂ ಪ್ರಾಮುಖ್ಯ ಗಳಿಸಿತ್ತು. ಹಲಶಿಯ ಹತ್ತಿರದಲ್ಲಿರುವ ಕಂಡಿಕೋಣೆ ಗೋರಿಗಳು ಈ ಸ್ಥಳದ ಇತಿಹಾಸವನ್ನು ಕ್ರಿ.ಪೂ. 500ಕ್ಕೂ ಹಿಂದೆ ಕೊಂಡೊಯ್ಯುತ್ತವೆ. ಇವಲ್ಲದೆ ಸಾತವಾಹನರ ಆಳ್ವಿಕೆಯ ಕಾಲದ ಉತ್ತರಾರ್ಧ (ಸು. 1-3ನೆಯ ಶತಮಾನ) ಹಾಗೂ ಸಾತವಾಹನಾನಂತರ ಕಾಲದ (ಸು. 4ನೆಯ ಶತಮಾನ) ಇಟ್ಟಿಗೆಯ ಕಟ್ಟಡ, ಕೆಂಪು ಮಡಕೆ ಚೂರುಗಳು ಇತ್ಯಾದಿ ಅವಶೇಷಗಳು ಹತ್ತಿರದ ಬೊಡ್ಕೆಟೆಂಬೆ ಎಂದು ಕರೆಯಲ್ಪಡುವ ದಿಬ್ಬದಲ್ಲಿ ಕಾಣಸಿಗುತ್ತದೆ. ಬಹುಶಃ ಇದು ಪ್ರಾಚೀನ ಪಲಾಶಿಕಾ ನಗರವಿದ್ದ ಸ್ಥಳವನ್ನು ನಿದರ್ಶಿಸುತ್ತದೆ. ಇಲ್ಲಿ ಬನವಾಸಿ ಕದಂಬ ಅರಸುಮನೆತನದ ತಾಮ್ರಶಾಸನಗಳು ದೊರೆತಿವೆ.

	ಹಲಶಿಯಲ್ಲಿ ಶಾಂತಿವರ್ಮನ ಸ್ಮರಣಾರ್ಥವಾಗಿ ಜಿನಾಲಯವೊಂದು ಕಟ್ಟಲ್ಪಟ್ಟಿತೆಂದು ಕದಂಬ ಮೃಗೇಶವರ್ಮನ (ಸು. 455-80) ಶಾಸನವೊಂದರಿಂದ ತಿಳಿಯುತ್ತದೆ. ಆತನ ಅನಂತರ ಆಳಿದ ರವಿವರ್ಮ (ಸು. 485-519) ಹಲಶಿಯನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡ. ಅಲ್ಲದೆ, ಜಿನೇಂದ್ರನ ಪೂಜಾರ್ಥವಾಗಿ ನಡೆಯಬೇಕಾದ ಆಚರಣೆಗಳನ್ನು ಆತ ನಿರ್ದಿಷ್ಟಗೊಳಿಸಿದ. ಆತನ ತಮ್ಮ ಭಾನುವರ್ಮನೂ ಜಿನಾಲಯಕ್ಕೆ ಭೂಮಿದಾನ ಮಾಡಿದ್ದಾಗಿ ತಿಳಿಯುತ್ತದೆ. ಮನೆತನದ ಕೊನೆಯ ಅರಸು ಹರಿವರ್ಮ ವಸಂತವಾಟಕ ಹಳ್ಳಿಯ ಆದಾಯವನ್ನು ಪೂಜಾದಿಗಳಿಗಾಗಿ ನೀಡಿದ.

	ಬನವಾಸಿ ಕದಂಬರ ಪತನಾನಂತರ ಹಲಶಿ ಮತ್ತೆ ಉಚ್ಛ್ರಾಯಸ್ಥಿತಿಗೇರಿ ದುದು ಗೋವ ಕದಂಬರ ಕಾಲದಲ್ಲಿ. ವರಾಹನರಸಿಂಹ ದೇವಾಲಯ ದಲ್ಲಿರುವ ಶಾಸನವೊಂದರಿಂದ ಗೋವ ಕದಂಬ ಅರಸು ಶಿವಚಿತ್ತ ಪೆರ್ಮಾಡಿ ದೇವ 1171ರಲ್ಲಿ ತನ್ನ ತಾಯಿಯ ಇಚ್ಛೆಯಂತೆ ಸಿಂಧವಳ್ಳಿಯನ್ನು ನರಸಿಂಹದೇವರ ಪೂಜೋಪಚಾರಕ್ಕಾಗಿ ದತ್ತಿ ಕೊಟ್ಟಂತೆ ತಿಳಿಯುತ್ತದೆ. ಈ ನರಸಿಂಹ ದೇವಾಲಯವನ್ನು ಮತಯೋಗಿ ಅಥವಾ ಯೋಗಿಮತೇಶ ಎಂಬವವನು ಕಟ್ಟಿಸಿದ್ದನೆಂದೂ ಶಿವಚಿತ್ತನ ತಮ್ಮ ವಿಷ್ಣುಚಿತ್ತ ಕೂಡ ನರಸಿಂಹದೇವರ ಅಷ್ಟೋಪಚಾರಕ್ಕಾಗಿ ಬಾಲಕ ಹಳ್ಳಿಯನ್ನು ಭೂದಾನ ಮಾಡಿದನೆಂದೂ ಇದೇ ಶಾಸನದಿಂದ ತಿಳಿದುಬರುತ್ತದೆ. ಹಲಶಿಯು ಹಲಶಿಗೆ 12,000 ವಿಭಾಗದ ರಾಜಧಾನಿಯಾಗಿತ್ತೆಂದು ಇತರ ಶಾಸನಗಳಿಂದ ತಿಳಿಯುತ್ತದೆ. 14ನೆಯ ಶತಕದ ಅನಂತರದ ಇತಿಹಾಸದಲ್ಲಿ ಹಲಶಿಯ ಪ್ರಾಮುಖ್ಯ ಇಳಿಮುಖವಾದಂತೆ ತೋರುತ್ತದೆ. 15-16ನೆಯ ಶತಮಾನಗಳಿಗೆ ಸೇರುವ ಕೆಲವೇ ಶಿಲ್ಪಗಳು, ಸತಿಗಲ್ಲು-ವೀರಗಲ್ಲುಗಳನ್ನುಳಿದರೆ ವಿಶೇಷವಾಗಿ ಬೇರೇನೂ ದೊರೆಯುವುದಿಲ್ಲ.

	ಇಲ್ಲಿ ವರಾಹನರಸಿಂಹ, ಸುವರ್ಣೇಶ್ವರ, ಲಕ್ಷ್ಮೀನಾರಾಯಣ, ಕಲ್ಲೇಶ್ವರ, ಹಾಟಕೇಶ್ವರ, ರಾಮಲಿಂಗೇಶ್ವರ, ಸೂರ್ಯ, ಶಂಕರನಾರಾಯಣ ಮೊದಲಾದ ದೇವಾಲಯಗಳಿವೆ. ಇವುಗಳಲ್ಲಿ ಕೆಲವು ಮಾತ್ರ ಸುಸ್ಥಿತಿಯಲ್ಲುಳಿದಿವೆ. ಐತಿಹಾಸಿಕ ಹಾಗೂ ಸೌಂದರ್ಯದ ದೃಷ್ಟಿಯಲ್ಲಿ ವರಾಹನರಸಿಂಹ ದೇವಾಲಯ ಮುಖ್ಯವಾದುದು. ಇದೊಂದು ದ್ವಿಕೂಟ ದೇವಾಲಯವಾಗಿದ್ದು ಒಂದು ಗರ್ಭಗೃಹದಲ್ಲಿ ನರಸಿಂಹ ಹಾಗೂ ಭೂವರಾಹ ವಿಗ್ರಹಗಳನ್ನೂ ಇನ್ನೊಂದರಲ್ಲಿ ಯೋಗಿನಾರಾಯಣ ದೇವರ ವಿಗ್ರಹಗಳನ್ನೂ ಇರಿಸಲಾಗಿದೆ. ಭೂವರಾಹ ಹಾಗೂ ಯೋಗಿನಾರಾಯಣ ವಿಗ್ರಹಗಳು ಅತ್ಯುತ್ತಮ ಮಟ್ಟದ ಶಿಲ್ಪಗಳಾಗಿದ್ದು, ಕರ್ನಾಟಕ ಶಿಲ್ಪಕ್ಕೆ ಗೋವ ಕದಂಬರ ಅಪೂರ್ವ ಕೊಡುಗೆಗಳಾಗಿವೆ. ಈ ದೇವಾಲಯದ ಶಿಖರಗಳು ಕದಂಬ ನಾಗರ ಶೈಲಿಯಲ್ಲಿವೆ. ಸೂರ್ಯ, ಲಕ್ಷ್ಮೀ ನಾರಾಯಣ, ಕಾಲಭೈರವ, ಗರುಡ, ಮಹಾಲಕ್ಷ್ಮೀ, ಕೇಶವ ಇತ್ಯಾದಿ ಶಿಲ್ಪಗಳೂ ಇಲ್ಲಿವೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
		(ಎಸ್.ಆರ್.ವಿ.)